Tuesday, March 12, 2013

ಬ್ರೂಣ ಸಂಭಾಷಣೆ



ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರದ ಕೆಳಗೆ
ಗರ್ಭವತಿ ತಾಯಿ ಮಲಗಿದ್ದಾಳೆ,
ಹೊಟ್ಟೆಯೊಳಗಿಂದ ಅವಳಿ ಹೆಣ್ಣು ಬ್ರೂಣಗಳು
ಮೆಲ್ಲಗೆ ಪಿಸುಗುಟ್ಟ ತೊಡಗಿದವು .

ಒಂದನೇ ಬ್ರೂಣ:
ಉದರ ಒಡತಿಯೇ ನಮ್ಮ ತಾಯಿ
ಜನ್ಮದಾತನೆ ನಮ್ಮ ತಂದೆ
ಧರೆಗೆ ಈರ್ವರೆ ಮೊದಲ ದೇವರು.
ಎನಿತು ಸಂಭ್ರಮ ,ಎನಿತು ಸಂತಸ,

ಎರಡನೇ ಬ್ರೂಣ:
ಅಕ್ಕಾ,ನಾವು ಹೆಣ್ಗಳಂತೆ......
ಧರೆಯ ಪೋಷಿಪ ಕಂಗಳಂತೆ.
ಎಲ್ಲ ಹಾಡಿ ಹೊಗಳ್ವರು
ಗಂಡು ಮಗುವೆ ಬೇಕೆನ್ವರು .

ಒಂದನೇ ಬ್ರೂಣ:
ನಾವು ಎರವರು ಅವರ ಜಗಕೆ
ಮಡದಿ ಮಾತ್ರವೇ ಶಯನ ಗೃಹಕೆ.
ಹೆಣ್ಣು ಜನ್ಮವು ಪಾಪವಂತೆ...
ಮುಸುರೆ ತಿಕ್ಕುವ ಜೀತರಂತೆ.

ಎರಡನೇ ಬ್ರೂಣ:
ಬಿಸಿಯ ಉಸಿರು ಸೋಕುತಿಹದು
ಅಮ್ಮನೆಕೋ ಅಳುತಲಿಹಳು.
ಯಾರೋ ಗಂಡು ವಾದಗೈವಂತಿದೆ
ನಮ್ಮನಳಿಸಲು ಪಿತೂರಿ ನಡೆದಂತಿದೆ.
ಬಿಕ್ಕಿತಾ ಬ್ರೂಣವು.....!

ಒಂದನೇ ಬ್ರೂಣ:
ಅಯ್ಯೋ! ಪಾಪಿ ಗಂಡು ಕುಲವೇ
ನಾವು ಇಲ್ಲದ ಲೋಕ ತರವೇ.
ಜನ್ಮ ನೀಡಿದ ತಾಯಿ ಹೆಣ್ಣು ...
ಮನೆಯ ಬೆಳಗಿದ ಜ್ಯೋತಿ ಹೆಣ್ಣು.

ಸಮತೆ ತೋಟದ ಗಂಧ ಕುಸುಮ
ಇಳೆಗೆ ಇಬ್ಬರೂ ಸಮ.

ಅದಾಗಲೇ ಅಪರೇಷನ್ ಶುರುವಾಗಿದೆ...
ಎರಡನೇ ಬ್ರೂಣ:
ಅಕ್ಕಾ, ಏನೋ ಚುಚ್ಚುತಿಹದು ...
ಮಚ್ಚು ಕತ್ತರಿ ಕಾಣುತಿಹದು .......

ಅಂತ್ಯವಾಯಿತು ಅವಳಿ ಜನ್ಮ 
ಗಂಡು ಮೆರೆಯಿತು 
ಹೆಣ್ಣು ನರಳಿತು.
ಸಮತೆ ತೋಟದ ಹೂವು ಬಾಡಿತು.

3 comments:

  1. ನಿಮ್ಮ ಬ್ಲಾಗ್ ಆರಂಭಕ್ಕೆ ಅಭಿನಂದನೆಗಳು....

    ಬ್ರೂಣ ಸಂಭಾಷಣೆಯ ಕವನ ಬಹಳ ಇಷ್ಟವಾಯಿತು...

    ಸಮತೆ ತೋಟದ ಗಂಧ ಕುಸುಮ
    ಇಳೆಗೆ ಇಬ್ಬರೂ ಸಮ.

    ಒಂದೊಂದು ಪದಗಳು ಅರ್ಥಗರ್ಭಿತವಾಗಿವೆ...

    ReplyDelete
  2. This comment has been removed by the author.

    ReplyDelete
  3. "ನನ್ನ ಪ್ರೀತಿಯ ದೇಸೀ ಕವಿಗಳಿಂದ ಮೊದಲನೆಯ ಬರಹವೇ ಈ ರೀತಿ ಬಂದಿರುವುದನ್ನ ನೋಡಿ ಸಂತಸವಾಯಿತು :) ನಿಜಕ್ಕೂ ಮನಕಲುಕುವ ಸಾಲುಗಳು ಅರುಣಾ :)
    ನಾ ನಿನ್ನ ಅಭಿಮಾನಿ ಅಂತ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ" :p
    ಇದು ನನ್ ಕಾಮೆಂಟು :P
    "ಲೇ ಹುಚ್ಚ ಅರುಣ್ಯಾ, ನಾನ್ ನಿನ್ನ ಮೊದಲನೆಯ ಬ್ಲಾಗ್ ಪೋಸ್ಟ್ ನ Share ಮಾಡ್ಬೇಕು ಅಂತಾ ನೋಡಿದ್ರೆ, ನಿನ್ ಬ್ಲಾಗ್ ನಲ್ಲಿ Share Option ಇಲ್ ಲೇ ಮಗನಾ" :X
    ಇದು ನನ್ನ ಸಿಟ್ಟು :/

    ReplyDelete