Tuesday, March 12, 2013

ಬ್ರೂಣ ಸಂಭಾಷಣೆ



ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರದ ಕೆಳಗೆ
ಗರ್ಭವತಿ ತಾಯಿ ಮಲಗಿದ್ದಾಳೆ,
ಹೊಟ್ಟೆಯೊಳಗಿಂದ ಅವಳಿ ಹೆಣ್ಣು ಬ್ರೂಣಗಳು
ಮೆಲ್ಲಗೆ ಪಿಸುಗುಟ್ಟ ತೊಡಗಿದವು .

ಒಂದನೇ ಬ್ರೂಣ:
ಉದರ ಒಡತಿಯೇ ನಮ್ಮ ತಾಯಿ
ಜನ್ಮದಾತನೆ ನಮ್ಮ ತಂದೆ
ಧರೆಗೆ ಈರ್ವರೆ ಮೊದಲ ದೇವರು.
ಎನಿತು ಸಂಭ್ರಮ ,ಎನಿತು ಸಂತಸ,

ಎರಡನೇ ಬ್ರೂಣ:
ಅಕ್ಕಾ,ನಾವು ಹೆಣ್ಗಳಂತೆ......
ಧರೆಯ ಪೋಷಿಪ ಕಂಗಳಂತೆ.
ಎಲ್ಲ ಹಾಡಿ ಹೊಗಳ್ವರು
ಗಂಡು ಮಗುವೆ ಬೇಕೆನ್ವರು .

ಒಂದನೇ ಬ್ರೂಣ:
ನಾವು ಎರವರು ಅವರ ಜಗಕೆ
ಮಡದಿ ಮಾತ್ರವೇ ಶಯನ ಗೃಹಕೆ.
ಹೆಣ್ಣು ಜನ್ಮವು ಪಾಪವಂತೆ...
ಮುಸುರೆ ತಿಕ್ಕುವ ಜೀತರಂತೆ.

ಎರಡನೇ ಬ್ರೂಣ:
ಬಿಸಿಯ ಉಸಿರು ಸೋಕುತಿಹದು
ಅಮ್ಮನೆಕೋ ಅಳುತಲಿಹಳು.
ಯಾರೋ ಗಂಡು ವಾದಗೈವಂತಿದೆ
ನಮ್ಮನಳಿಸಲು ಪಿತೂರಿ ನಡೆದಂತಿದೆ.
ಬಿಕ್ಕಿತಾ ಬ್ರೂಣವು.....!

ಒಂದನೇ ಬ್ರೂಣ:
ಅಯ್ಯೋ! ಪಾಪಿ ಗಂಡು ಕುಲವೇ
ನಾವು ಇಲ್ಲದ ಲೋಕ ತರವೇ.
ಜನ್ಮ ನೀಡಿದ ತಾಯಿ ಹೆಣ್ಣು ...
ಮನೆಯ ಬೆಳಗಿದ ಜ್ಯೋತಿ ಹೆಣ್ಣು.

ಸಮತೆ ತೋಟದ ಗಂಧ ಕುಸುಮ
ಇಳೆಗೆ ಇಬ್ಬರೂ ಸಮ.

ಅದಾಗಲೇ ಅಪರೇಷನ್ ಶುರುವಾಗಿದೆ...
ಎರಡನೇ ಬ್ರೂಣ:
ಅಕ್ಕಾ, ಏನೋ ಚುಚ್ಚುತಿಹದು ...
ಮಚ್ಚು ಕತ್ತರಿ ಕಾಣುತಿಹದು .......

ಅಂತ್ಯವಾಯಿತು ಅವಳಿ ಜನ್ಮ 
ಗಂಡು ಮೆರೆಯಿತು 
ಹೆಣ್ಣು ನರಳಿತು.
ಸಮತೆ ತೋಟದ ಹೂವು ಬಾಡಿತು.